Sunday, November 30, 2008

ಆಗ್ಲೇ ಮೊಬೈಲು, ಮೆಸೇಜು ಇಷ್ಟು ಚೀಪ್ ಆಗಿದ್ರೆ...!
ಮೈ ಡಿಯರ್ ಬೀದಿ ಬೆಕ್ಕೇ...,


ಪ್ರೇಮ ಪತ್ರ ಅಂದ ಕೂಡಲೇ ನೀನೆ ನೆನಪಾಗ್ತಿ. ಪ್ರೇಮ ಪತ್ರ ಮಾತ್ರವಲ್ಲ ಈಗ ಔಟ್ ಡೇಟ್ ಆಗಿರೋ ಸ್ಟ್ರೀಟ್ ಕ್ಯಾಟ್ ಸೈಕಲ್ಲು, ದೊಗಳೆ ದೊಗಳೆ ಚೂಡಿ ಧರಿಸಿದ ಹುಡುಗೀರು, ಚರ್ಚ್ ಒಳಗಿನ ಮೌನ, ಹಳದಿ ಗುಲಾಬಿ, ಆಯುರ್ವೇದ ವೈದ್ಯರು ಮತ್ತು ತುಟಿಯ ಮೇಲಿನ ಚುಕ್ಕಿ ಕಂಡಾಗಲೆಲ್ಲಾ ನೀನೆ ನೆನಪಾಗ್ತಿ.


ಮತ್ತೂ.., ಮೊಬೈಲ್ ಮೂಲಕ ಲವ್ ಕುದುರಿತು, ಮಿಸ್ ಕಾಲ್‌ನಿಂದ ಶುರುವಾದ ಪರಿಚಯ ಲವ್ ಆಯ್ತು, ಮೆಸೇಜ್ ಮೂಲಕ ಪ್ರಪೋಸ್ ಮಾಡಿಬಿಟ್ಟೆ ಎಂದು ಪಿಯುಸಿ ಹುಡುಗರು ಹೇಳಿಕೊಳ್ಳುವಾಗಲೂ ನೀನು ಒಮ್ಮೆ ಕಣ್ಣ ಮುಂದೆ ಬಂದು ನಕ್ಕಂತೆ ಆಗುತ್ತದೆ. ನಾವು ಪಿಯುಸಿ ಓದೋವಾಗ್ಲೂ ಮೊಬೈಲು, ಮೆಸೇಜು ಇಷ್ಟು ಚೀಪ್ ಆಗಿದ್ದಿದ್ರೆ ನೀನು ನನ್ನವಳಾಗ್ತಿದ್ದೇನೋ ಅಂತ ಮನಸ್ಸು ಬಡಬಡಿಸುತ್ತೆ. ಇಲ್ಲಾಂದ್ರೆ ನಮ್ಮಪ್ಪ ಅಟ್ ಲೀಸ್ಟ್ ನನಗೆ ಮೊಬೈಲ್ ಕೊಡಿಸುವಷ್ಟು ಶ್ರೀಮಂತನಾದರು ಆಗಬೇಕಿತ್ತು.


ನಿನಗೆ ನೆನಪಿದೆಯಾ..?


ನಾನು ನಿನ್ನ ಪಕ್ಕದ ಬೆಂಚಿನಲ್ಲೇ ಹುಡುಕಿ ಹುಡುಕಿ ಕೂರುತ್ತಿದೆ. ನಿನ್ನ ಪಕ್ಕದ ಜಾಗ ಹಿಡಿದುಕೊಡಲು ಅರುಣ, ಲೋಕೇಶ ಬಹಳವೇ ಕಷ್ಟಪಡುತ್ತಿದ್ದರು. ಆಗಾಗ ಚೀಣ್ಯ ರವಿಯೂ ಹೆಲ್ಪ್ ಮಾಡ್ತಿದ್ದ . ಪುಟ್ಟ ಪುಟ್ಟ ಕವಿತೆ ಬರೆದು, ಅದರ ಕೆಳಗೆ ನನ್ನ ಹೆಸರು ಬರೆದು. ಹೆಸರಿನ ಕೆಳಗೆ ತುಟಿ, ತುಟಿ ಮೇಲೊಂದು ಚುಕ್ಕಿ ಇಡುತ್ತಿದೆ. ನೀನು ನೋಡಲಿ ಅಂತ.

ಒಂದು ದಿನ


ನನ್ನ ಮುಂದಿನ ಬೆಂಚಿನಲ್ಲಿ ಕೂತಿದ್ದ ವೆಂಕಟೇಶ ಬಿಡಿಸುತ್ತಿದ್ದ ಕಾರ್ಟೂನ್ ಅನ್ನು ನೀನು ತಲ್ಲೀನಳಾಗಿ ನೋಡುತ್ತಿದ್ದೆ. ಎಷ್ಟು ಕೋಪ ಬಂದಿತ್ತು ಅಂದ್ರೆ ಅವತ್ತು.. ನಾನೂ ಕಾರ್ಟೂನ್ ಬಿಡಿಸಿದ್ದೆ. ಮಾರಿಗುಡಿ ಲೆಕ್ಚರರ್ ಕಾರ್ಟೂನ್ ಬಿಡಿಸಿ ನೀನು ನೋಡಲಿ ಅಂತ ಹರಸಾಹಸ ಮಾಡಿದ್ದೆ. ಅದನ್ನು ನೋಡಿ ನಿನ್ನ ತುಟಿ ಮೇಲಿನ ಚುಕ್ಕಿಯೂ ನಕ್ಕಿತ್ತು! ಅದೇ ಸ್ಫೂರ್ತಿಯಾಗಿ ಶೀಲಾ ಮೇಡಂ, ನಿನ್ನ ಆಪ್ತ ಗೆಳತಿ ಶೈಲಾ, ಶೈನಿ ಹೀಗೆ ಅವರ ಕಾರ್ಟೂನ್‌ಗಳನ್ನು ಬಿಡಿಸಿದ್ದೆ. ಆ ನಗುವಿಗೆ ಏನಿತ್ತೋ ಅರ್ಥ? ಚಿತ್ರ ಬಿಡಿಸುವುದು ಎಂದರೆ ವಿಚಿತ್ರವಾಗಿ ಆಡುತ್ತಿದ್ದ ನಾನೇನ ಇದನ್ನೆಲ್ಲಾ ಬಿಡಿಸಿದ್ದು ಎಂದು ಅವತ್ತಿಗೂ, ಇವತ್ತಿಗೂ ನನ್ನಲ್ಲಿ ಆಶ್ಚರ್ಯವಿದೆ. ಎಷ್ಟು ಶಕ್ತಿ ಇತ್ತು ನಿನಗೆ. ನನ್ನಿಂದ ದಿನಕ್ಕೆ ೧೦ -೧೨ ಪುಟಗಳ ಪತ್ರ ಬರೆಸುತ್ತಿದ್ದೆ. ಬೆಳಗ್ಗೆ ೪ಕ್ಕೆ ಎದ್ದು ೨ ಕಿ.ಮೀ ಸೈಕಲ್ ತುಳಿದು , ಲಾರಿ ಹಿಡಿದು, ಸಂಜಯ ಟಾಕೀಸ್‌ಬಳಿಯಿಂದ ಕರ್ನಾಟಕ ಬಾರ್ ಸರ್ಕಲ್ ತನಕ ಓಡೋಡಿ ಬರುತ್ತಿದ್ದೆ. ಕ್ಷಣ ಮಿಸ್ಸಾದರೂ ನೀನು, ನಿನ್ನ ಸ್ಮೈಲು ಎರಡು ಮಿಸ್ಸಾಗುತ್ತಿತ್ತು. ಈಗ್ಲೂ ಹಾಗೇ ಟೈಮ್ ಮೇಂಟೇನ್ ಮಾಡ್ತಿಯಾ?, ನೀನಿರೋ ದೇಶದಲ್ಲಿ ಈಗ ಟೈಮೆಷ್ಟು?


ನೆನಪಾಗ್ತೀನಾ..? ಕಡೇ ಪಕ್ಷ ನನ್ನ ಪತ್ರಗಳನ್ನು ಸುಟ್ಟು ನೀನು ಮಾಡಿಕೊಂಡ ಹಿತವಾದ ಸ್ನಾನವಾದರೂ ನೆನಪಿದೆಯಾ?. ಅವ್ನು ಪತ್ರ ಕಳಿಸೋದು ತಡ ಮಾಡ್ಬಿಟ್ಟ ಅಂತ ನೀನು ಹೇಳುತ್ತಿದ್ದದ್ದು ಮೊದಲು ಕೇಳಿಸಿಕೊಂಡಾಗ ನೋವಿನಲ್ಲೂ ಖುಷಿಯಾಗಿತ್ತು. ಅದ್ಕೆ ಈಗ್ಲೂ ನನಗೆ ಈಗಿನ ಮೊಬೈಲು -ಮೆಸೇಜು ಕುದುರಿಸುವ ಲವ್ ನೋಡಿದಾಗ ಹೊಟ್ಟೆ ಕಿಚ್ಚಾಗುತ್ತೆ. ಹೊಟ್ಟೆ ಕಿಚ್ಚಿನಿಂದಲೇ ಅವರಿಗೆ ಹಾರೈಸ್ತೇನೆ. ಅಮ್ಮ ಮದುವೆ ಆಗು ಅಂತಿದ್ದಾಳೆ. ನಾನು ನಿನ್ನ ಕೇಳಬೇಕು ಅಂತ ಕಾಯ್ತಾ ಇದ್ದೀನಿ ಏನಂತಿಯಾ ...?

ಇಂದಿಗೂ ನಿನ್ನ

ಆಕಾಂಕ್ಷಿ


(ಲೇಖಕರು: ಎಚ್.ಎಸ್. ಅವಿನಾಶ್, ಪತ್ರಕರ್ತರು, ವಾಸ - ಧಾರವಾಡ, ಹುಟ್ಟೂರು - ಮಂಡ್ಯ, ಶಿಕ್ಷಣ- ಬಿಎ- ಪತ್ರಿಕೋದ್ಯಮ, ಮಹಾರಾಜ ಕಾಲೇಜು, ಮೈಸೂರು)

Sunday, March 30, 2008

ಕಳವಳಿಸದ ನೆಲದ ಚೆಲುವಿಗೆ ನಿನ್ನ ಪ್ರೀತಿಯೇ ಕಾರಣಜೀವವೆ,

ಮೌನದ ಸದ್ದು ಎದೆ ಕೊರೆಯುತ್ತಿದೆ. ಮಾತುಗಳು ಬರಡಾಗಿವೆ. ಇನ್ನು ಅಕ್ಷರವೇ ಗತಿ ಎಂದು ಕುಳಿತಿದ್ದೇನೆ. ಇಂಥ ಕಾಗದದ ದೋಣಿಯ ಯಾನ ಸ್ಟ್ರಕ್ ಆಗಿ ಎಷ್ಟೊಂದು ದಿನ ಆಯ್ತು ಗೆಳತಿ? ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ? ಹಿಂಗಂದುಬಿಟ್ಟರೆ ಪ್ರೀತಿ ತುಂಬಿ ತುಳುಕಿ ಮಾತನಾಡಿಸಿ ಬಿಡ್ತೀಯ ಅಂತ ನನಗೇನೂ ನಂಬಿಕೆ ಇಲ್ಲ. ಮೂಗಿನ ತುದಿಯ ಮೇಲೆ ಸದಾ ಇರುವ ಸಿಟ್ಟನ್ನು ಎದೆಯಲ್ಲಿರೋ ಪ್ರೀತಿನ ಬಸಿಯೋಕೆ ಬಿಡೋ ಹಠಮಾರಿ ಹುಡುಗಿ ನೀನು.

ಬೈಯೋಕೆ ಶುರುಮಾಡಿದ ಅಂತನ್ನಬೇಡಮ್ಮಾ. ಬೈಯೋದು ಕೂಡ ಓಲೈಸುವ, ಪ್ರೀತಿಸುವ ಇನ್ನೊಂದು ಬಯಲು ದಾರಿ ಅಂತ ನೀನೆ ತಾನೆ ಹೇಳ್ಕೊಟ್ಟಿರೋದು?!

ನಂಗೊತ್ತು. ನಿಂಗೆ ಉಸಿರಾಡೋಕೂ ಪುರುಸೊತ್ತಿಲ್ಲ ಅಂತ. ಹಂಗಂತ ನಿಂಗೆ ಬರೆಯೋದನ್ನು ನಿಲ್ಲಿಸಿ ನಂಗೆ ಎಷ್ಟು ನಷ್ಟವಾಗಿದೆ ಅಂತ ನಂಗೆ ಮಾತ್ರ ಗೊತ್ತು. (ಅದನ್ನ ನೀವೇ ತಿಳ್ಕೊಂಡು ಚೆನ್ನಾಗಿರಿ ಅಂತ ಶಾಪ ಹಾಕ್ಬೇಡ.) ಎಷ್ಟೊಂದು ಮಾತುಗಳು ಬಸಿರಲ್ಲೆ ಅಸುನೀಗಿದ ಕಂದಮ್ಮಗಳಂತಾದವಲ್ಲ. ಇಬ್ಬರಲ್ಲಿ ಯಾರಾದರೂ ಸರಿ, ಮೌನವೆಂಬ ಚೂಪುಗತ್ತಿ ಇಬ್ಬರ ಎದೆಯ ಶಬ್ಬದ, ಮಾತಿನ ಚಿಗುರುಗಳನ್ನು ಕೈಮಾ ಮಾಡುವುದು ಹಂಡ್ರೆಡ್ ಪರ್ಸೆಂಟ್ ನಿಜವಾಗಿ ಬಿಟ್ಟಿದೆ ನಮ್ಮ ವಿಷಯದಲ್ಲಿ. ಮೌನದ ಬಗ್ಗೆ ಪಾಸಿಟಿವ್ ಆಗಿ ಯಾರು ಏನೇ ಹೇಳಿದರೂ, ನಮ್ಮ ನಡುವಿನ ಮೌನ ಭಲೇ ಖತರ್‌ನಾಖ್. ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ...

ಇದೂ ಅಂತದೇ ಒಂದು ಪುಟ್ಟ ಕಾಗದದ ದೋಣಿ ಎಂದರೆ ನೀನು ನಂಬುವುದಿಲ್ಲ. ಅಲ್ಲವೆ?

***

'ಪ್ರೀತಿಯನ್ನು ಎದೆಯಲ್ಲೇ ಇಟ್ಟುಕೊಂಡರೆ ಚೆನ್ನ ಕಣೋ' ಅಂತ ನೀನೇನೋ ಹೇಳಿ ಸುಮ್ಮನಾಗಿ ಬಿಟ್ಟಿದ್ದೀಯ (ನಮ್ಮಪ್ಪನೂ ಹಂಗೆ. ಮಕ್ಕಳ ಮುಂದೆ ಪ್ರೀತಿ ತೋರಿಸ್ಬಾರ್ದು ಅಂತ ಸದಾ ಗಂಭಿರವದನನಾಗಿಯೇ ಇದ್ದೂ ಇದ್ದೂ, ಅಪ್ಪನ ಎದೆಯಲ್ಲಿ ನಮ್ಮ ಬಗ್ಗೆ ಎಷ್ಟು ಪ್ರೀತಿ ಇದೆ ಅಂತ ನಮಗೆ ಗೊತ್ತಾಗೋ ಹೊತ್ತಿಗೆ ಆತನನ್ನು ದ್ವೇಷಿಸೋಕೆ ಶುರು ಮಾಡಿದ್ವಿ). ಆದರೆ ಜೊತೆಯಾದಾಗಲೆಲ್ಲಾ ನನ್ನ ಕಣ್ಣುಗಳನ್ನು ನೋಡೋದನ್ನ ಬೇಕಂತಲೇ ತಪ್ಪಿಸ್ತೀಯ. ಕಣ್ಣೊಳಗೆ ಇಣುಕುವ ಪ್ರೀತಿ ಕಂಡರೆ ಭಯ ನಿಂಗೆ. ಅಸಲೇ, ಪ್ರಕಟಗೊಳ್ಳುವ ಪ್ರೀತಿ ನಿಂಗೆ ಭಯಾನಕ. ಎದೆಯಲ್ಲಿ ಬೆಟ್ಟದಷ್ಟು (ಹೋಲಿಕೆ ಹಳೆಯದಾಯಿತೆ?) ಪ್ರೀತಿ ಇಟ್ಕೊಂಡು ಸುಮ್ಮನೆ ಇರೋದಿಕ್ಕೆ ಪ್ರಯತ್ನಿಸೋದು ಹೇಗೆ ಹೇಳು ಜೀವವೆ?

'ಹೌ ಡೇರ್ ಯು ಟು ಸ್ಟೇರ್'ಅಂತ ಒಂದ್ಸಾರಿ ಎಗರಿಬಿಟ್ಟಿದ್ದಲ್ಲೆ ಗೆಳತಿ. ಎಲ್ಲ ಹುಡ್ಗೀರೂ ಹಿಂಗೇ ಆಡ್ತಾರೇನೋ ಅಂತ ಭಯವಾಗಿತ್ತು. ಹಂಗೇನೂ ಅಲ್ಲ ಅಂತ ಆಮೇಲೆ ಗೊತ್ತಾಯ್ತು ಬಿಡು... (ಕೋಪ ಬಂತಾ?)

***

ಇದನ್ನೆಲ್ಲೆ ಬರೆಯುತ್ತಿರುವ ೧೩ ರ ಸಂಜೆ ಯಥಾ ಪ್ರಕಾರ ಡಲ್ಲಾಗಿದೆ ಎನ್ನುವಂತಿಲ್ಲ. ಸೀತಾವಿಲಾಸ ರಸ್ತೆಯಲ್ಲಿರುವ ನಮ್ಮ ಆಫೀಸು ಎದುರು ಇರೋ 'ಆರ್ಚೀಸ್ ಗ್ಯಾಲರಿ' ತುಂಬ ಹುಡುಗ- ಹುಡುಗಿಯರು ಯಾ ಪ್ರೇಮಿಗಳು ತುಂಬಿ ತುಳುಕುತ್ತಿದ್ದಾರೆ. ತಮ್ಮ ಎದೆಯ ಪ್ರೀತಿಗೊಪ್ಪುವ ಮಾತು ಮತ್ತು ಚಿತ್ರವಿರುವ ಗ್ರೀಟಿಂಗ್ ಕಾರ್ಡುಗಳಿಗಾಗಿ, ಗಿಫ್ಟುಗಳಿಗಾಗಿ ಹುಡುಕಾಡುತ್ತಿದ್ದಾರೆ. ಸಾಲುಗಳು ಮತ್ತು ಬಣ್ಣಗಳ ಮೇಲೇ ಎಲ್ಲರ ಕಣ್ಣು. (ಈ ನಡುವೆ ಇಂಥ ಆಪರ್ಚುನಿಟೀನ ಯೂಸ್ ಮಾಡಿಕೊಳ್ಳೋಣ ಅಂತ ಕೆಲ ಪಡ್ಡೆ ಹುಡುಗರೂ ಬಂದಿದ್ದಾರೆ. ನಾನು ಅಂಥವರ ಪೈಕಿ ಅಲ್ಲ ಎಂದು ಎಷ್ಟು ಸಾರಿ ಹೇಳಿದ್ರೂ ನೀನು ಯಾಕೆ ನಂಬೋಲ್ಲ?) ಯಾಕೋ ಯಾರಿಗೂ 'ಸರಿಯಾದ್ದು ಸಿಕ್ತಿಲ್ವಲ್ಲ' ಎಂಬ ಬೇಜಾರು. ಹೀಗಾಗಿ ಚೌಕಾಸಿ ಮಾಡಿ, ಇರೋದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಇದನ್ನು ಕೊಡಬಹುದು ಅಂತ ಫರ್ಮಾನು ಹೊರಡಿಸಿಕೊಂಡು ಹೊರಡುತ್ತಿದ್ದಾರೆ.

'ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ ಒಂದು ಕವನ' ಅಂತ 'ಸಂಸಾರದ ಕವಿ' ಕೆ.ಎಸ್. ನರಸಿಂಹಸ್ವಾಮಿಗಳು ಹೇಳಿದ್ದು ಕರೆಕ್ಟು. ಇಲ್ಲ, ಇಲ್ಲಿ ಆಳದನುಭವವನ್ನು ಅನ್ನುವುದರ ಬದಲಿಗೆ ಆಳದ ಪ್ರೀತಿಯನ್ನು ಎಂದುಕೊಂಡರೆ, ಅದನ್ನು ಮಾತು ಕೈ ಹಿಡಿಯುವುದೇ ಇಲ್ಲ. ಇನ್ನು ಕಾವು ಬೆಳಕಾಗುವುದು? ಪ್ರೀತಿ ಎಂಬ ಕವನ ಹುಟ್ಟುವುದು? ಇದೇನು ಕೊರೆತ ಶುರುಮಾಡಿದೆನಲ್ಲ ಎಂದುಕೊಳ್ಳುತ್ತಿದ್ದೀಯ?

***

ಇರಲಿ, 'ಕಳವಳಿಸದ ನೆಲದ ಚೆಲುವಿಗೆ ನಿನ್ನ ಪ್ರೀತಿಯೇ ಕಾರಣ' ಅಂತ ಅಜ್ಞಾತ ಕವಿಯ ಸಾಲನ್ನು ನೀನು ೧೩ ರ ಮಧ್ಯಾಹ್ನವೇ ಊಟ ಮಾಡೋಕೂ ಮುಂಚೆ ಮೆಸೇಜು ಮಾಡಿ ಸುಮ್ಮನಾಗಿಬಿಟ್ಟಿದ್ದರ ಮರ್ಮವಾದರೂ ಏನು? ಈ ಒಲವಿನ ಗೆಳತಿ ನಂಗೆ ಏನು ಹೇಳಬೇಕೆಂದಳು ಅಂತ ಯೋಚಿಸ್ತಿದ್ದೇನೆ.

***
ಇದು ನಿಂಗೆ ನಾನು ಬರೆದ ಪ್ರೇಮ ಪತ್ರ ಎಂದರೆ ಹುಚ್ಚು ಹೊಳೆಯಂತೆ ನಗುತ್ತೀಯ? ಮೂತಿ ಸೊಟ್ಟ ಮಾಡ್ತೀಯ? ಕೆಂಗಣ್ಣು ಬೀರ್ತೀಯ ಅಂತೆಲ್ಲಾ ಸುಮ್ಮಸುಮ್ಮನೆ ಅಂದ್ಕೊಳಲ್ಲ.

ನಂಗೊತ್ತು. ನೀನು ಇದನ್ನು ದೇವರ ಗುಡಿಯ ಹೂವಿನಂತೆ ಕಣ್ಣಿಗೊತ್ತಿಕೊಂಡು, ಅಷ್ಟೇ ಭಕ್ತಿ, ಉನ್ಮಾದ, ಕುತೂಹಲದಿಂದ ಅಕ್ಷರಕ್ಷರವನ್ನೂ, ನಿನಗೆ ಮಾತ್ರ ಕೇಳಿಸುವಂತೆ ಮತ್ತೆ ಮತ್ತೆ ಓದಿಕೊಳ್ಳುತ್ತೀಯ. ಇಷ್ಟಕ್ಕೂ ಪ್ರೀತಿ ಎಂದರೆ ಇದೇ ತಾನೆ? ಎದೆಯಲ್ಲಿ ಪ್ರೀತಿ ಇದೆ ಅಂತ ನೆನಪಿಸೋದು? ಏನಂತೀಯ?

ನಿನ್ನ...
(ಲೇಖಕರು: ಕೆ. ನರಸಿಂಹ ಮೂರ್ತಿ, ಪತ್ರಕರ್ತರು, ವಾಸ- ಮೈಸೂರು, ಹುಟ್ಟೂರು- ದೊಡ್ಡಬಳ್ಳಾಪುರ, ಶಿಕ್ಷಣ- ಕನ್ನಡ ಎಂ.ಎ, ಬೆಂಗಳೂರು ವಿವಿ)