Sunday, March 30, 2008

ಕಳವಳಿಸದ ನೆಲದ ಚೆಲುವಿಗೆ ನಿನ್ನ ಪ್ರೀತಿಯೇ ಕಾರಣ



ಜೀವವೆ,

ಮೌನದ ಸದ್ದು ಎದೆ ಕೊರೆಯುತ್ತಿದೆ. ಮಾತುಗಳು ಬರಡಾಗಿವೆ. ಇನ್ನು ಅಕ್ಷರವೇ ಗತಿ ಎಂದು ಕುಳಿತಿದ್ದೇನೆ. ಇಂಥ ಕಾಗದದ ದೋಣಿಯ ಯಾನ ಸ್ಟ್ರಕ್ ಆಗಿ ಎಷ್ಟೊಂದು ದಿನ ಆಯ್ತು ಗೆಳತಿ? ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ? ಹಿಂಗಂದುಬಿಟ್ಟರೆ ಪ್ರೀತಿ ತುಂಬಿ ತುಳುಕಿ ಮಾತನಾಡಿಸಿ ಬಿಡ್ತೀಯ ಅಂತ ನನಗೇನೂ ನಂಬಿಕೆ ಇಲ್ಲ. ಮೂಗಿನ ತುದಿಯ ಮೇಲೆ ಸದಾ ಇರುವ ಸಿಟ್ಟನ್ನು ಎದೆಯಲ್ಲಿರೋ ಪ್ರೀತಿನ ಬಸಿಯೋಕೆ ಬಿಡೋ ಹಠಮಾರಿ ಹುಡುಗಿ ನೀನು.

ಬೈಯೋಕೆ ಶುರುಮಾಡಿದ ಅಂತನ್ನಬೇಡಮ್ಮಾ. ಬೈಯೋದು ಕೂಡ ಓಲೈಸುವ, ಪ್ರೀತಿಸುವ ಇನ್ನೊಂದು ಬಯಲು ದಾರಿ ಅಂತ ನೀನೆ ತಾನೆ ಹೇಳ್ಕೊಟ್ಟಿರೋದು?!

ನಂಗೊತ್ತು. ನಿಂಗೆ ಉಸಿರಾಡೋಕೂ ಪುರುಸೊತ್ತಿಲ್ಲ ಅಂತ. ಹಂಗಂತ ನಿಂಗೆ ಬರೆಯೋದನ್ನು ನಿಲ್ಲಿಸಿ ನಂಗೆ ಎಷ್ಟು ನಷ್ಟವಾಗಿದೆ ಅಂತ ನಂಗೆ ಮಾತ್ರ ಗೊತ್ತು. (ಅದನ್ನ ನೀವೇ ತಿಳ್ಕೊಂಡು ಚೆನ್ನಾಗಿರಿ ಅಂತ ಶಾಪ ಹಾಕ್ಬೇಡ.) ಎಷ್ಟೊಂದು ಮಾತುಗಳು ಬಸಿರಲ್ಲೆ ಅಸುನೀಗಿದ ಕಂದಮ್ಮಗಳಂತಾದವಲ್ಲ. ಇಬ್ಬರಲ್ಲಿ ಯಾರಾದರೂ ಸರಿ, ಮೌನವೆಂಬ ಚೂಪುಗತ್ತಿ ಇಬ್ಬರ ಎದೆಯ ಶಬ್ಬದ, ಮಾತಿನ ಚಿಗುರುಗಳನ್ನು ಕೈಮಾ ಮಾಡುವುದು ಹಂಡ್ರೆಡ್ ಪರ್ಸೆಂಟ್ ನಿಜವಾಗಿ ಬಿಟ್ಟಿದೆ ನಮ್ಮ ವಿಷಯದಲ್ಲಿ. ಮೌನದ ಬಗ್ಗೆ ಪಾಸಿಟಿವ್ ಆಗಿ ಯಾರು ಏನೇ ಹೇಳಿದರೂ, ನಮ್ಮ ನಡುವಿನ ಮೌನ ಭಲೇ ಖತರ್‌ನಾಖ್. ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ...

ಇದೂ ಅಂತದೇ ಒಂದು ಪುಟ್ಟ ಕಾಗದದ ದೋಣಿ ಎಂದರೆ ನೀನು ನಂಬುವುದಿಲ್ಲ. ಅಲ್ಲವೆ?

***

'ಪ್ರೀತಿಯನ್ನು ಎದೆಯಲ್ಲೇ ಇಟ್ಟುಕೊಂಡರೆ ಚೆನ್ನ ಕಣೋ' ಅಂತ ನೀನೇನೋ ಹೇಳಿ ಸುಮ್ಮನಾಗಿ ಬಿಟ್ಟಿದ್ದೀಯ (ನಮ್ಮಪ್ಪನೂ ಹಂಗೆ. ಮಕ್ಕಳ ಮುಂದೆ ಪ್ರೀತಿ ತೋರಿಸ್ಬಾರ್ದು ಅಂತ ಸದಾ ಗಂಭಿರವದನನಾಗಿಯೇ ಇದ್ದೂ ಇದ್ದೂ, ಅಪ್ಪನ ಎದೆಯಲ್ಲಿ ನಮ್ಮ ಬಗ್ಗೆ ಎಷ್ಟು ಪ್ರೀತಿ ಇದೆ ಅಂತ ನಮಗೆ ಗೊತ್ತಾಗೋ ಹೊತ್ತಿಗೆ ಆತನನ್ನು ದ್ವೇಷಿಸೋಕೆ ಶುರು ಮಾಡಿದ್ವಿ). ಆದರೆ ಜೊತೆಯಾದಾಗಲೆಲ್ಲಾ ನನ್ನ ಕಣ್ಣುಗಳನ್ನು ನೋಡೋದನ್ನ ಬೇಕಂತಲೇ ತಪ್ಪಿಸ್ತೀಯ. ಕಣ್ಣೊಳಗೆ ಇಣುಕುವ ಪ್ರೀತಿ ಕಂಡರೆ ಭಯ ನಿಂಗೆ. ಅಸಲೇ, ಪ್ರಕಟಗೊಳ್ಳುವ ಪ್ರೀತಿ ನಿಂಗೆ ಭಯಾನಕ. ಎದೆಯಲ್ಲಿ ಬೆಟ್ಟದಷ್ಟು (ಹೋಲಿಕೆ ಹಳೆಯದಾಯಿತೆ?) ಪ್ರೀತಿ ಇಟ್ಕೊಂಡು ಸುಮ್ಮನೆ ಇರೋದಿಕ್ಕೆ ಪ್ರಯತ್ನಿಸೋದು ಹೇಗೆ ಹೇಳು ಜೀವವೆ?

'ಹೌ ಡೇರ್ ಯು ಟು ಸ್ಟೇರ್'ಅಂತ ಒಂದ್ಸಾರಿ ಎಗರಿಬಿಟ್ಟಿದ್ದಲ್ಲೆ ಗೆಳತಿ. ಎಲ್ಲ ಹುಡ್ಗೀರೂ ಹಿಂಗೇ ಆಡ್ತಾರೇನೋ ಅಂತ ಭಯವಾಗಿತ್ತು. ಹಂಗೇನೂ ಅಲ್ಲ ಅಂತ ಆಮೇಲೆ ಗೊತ್ತಾಯ್ತು ಬಿಡು... (ಕೋಪ ಬಂತಾ?)

***

ಇದನ್ನೆಲ್ಲೆ ಬರೆಯುತ್ತಿರುವ ೧೩ ರ ಸಂಜೆ ಯಥಾ ಪ್ರಕಾರ ಡಲ್ಲಾಗಿದೆ ಎನ್ನುವಂತಿಲ್ಲ. ಸೀತಾವಿಲಾಸ ರಸ್ತೆಯಲ್ಲಿರುವ ನಮ್ಮ ಆಫೀಸು ಎದುರು ಇರೋ 'ಆರ್ಚೀಸ್ ಗ್ಯಾಲರಿ' ತುಂಬ ಹುಡುಗ- ಹುಡುಗಿಯರು ಯಾ ಪ್ರೇಮಿಗಳು ತುಂಬಿ ತುಳುಕುತ್ತಿದ್ದಾರೆ. ತಮ್ಮ ಎದೆಯ ಪ್ರೀತಿಗೊಪ್ಪುವ ಮಾತು ಮತ್ತು ಚಿತ್ರವಿರುವ ಗ್ರೀಟಿಂಗ್ ಕಾರ್ಡುಗಳಿಗಾಗಿ, ಗಿಫ್ಟುಗಳಿಗಾಗಿ ಹುಡುಕಾಡುತ್ತಿದ್ದಾರೆ. ಸಾಲುಗಳು ಮತ್ತು ಬಣ್ಣಗಳ ಮೇಲೇ ಎಲ್ಲರ ಕಣ್ಣು. (ಈ ನಡುವೆ ಇಂಥ ಆಪರ್ಚುನಿಟೀನ ಯೂಸ್ ಮಾಡಿಕೊಳ್ಳೋಣ ಅಂತ ಕೆಲ ಪಡ್ಡೆ ಹುಡುಗರೂ ಬಂದಿದ್ದಾರೆ. ನಾನು ಅಂಥವರ ಪೈಕಿ ಅಲ್ಲ ಎಂದು ಎಷ್ಟು ಸಾರಿ ಹೇಳಿದ್ರೂ ನೀನು ಯಾಕೆ ನಂಬೋಲ್ಲ?) ಯಾಕೋ ಯಾರಿಗೂ 'ಸರಿಯಾದ್ದು ಸಿಕ್ತಿಲ್ವಲ್ಲ' ಎಂಬ ಬೇಜಾರು. ಹೀಗಾಗಿ ಚೌಕಾಸಿ ಮಾಡಿ, ಇರೋದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಇದನ್ನು ಕೊಡಬಹುದು ಅಂತ ಫರ್ಮಾನು ಹೊರಡಿಸಿಕೊಂಡು ಹೊರಡುತ್ತಿದ್ದಾರೆ.

'ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ ಒಂದು ಕವನ' ಅಂತ 'ಸಂಸಾರದ ಕವಿ' ಕೆ.ಎಸ್. ನರಸಿಂಹಸ್ವಾಮಿಗಳು ಹೇಳಿದ್ದು ಕರೆಕ್ಟು. ಇಲ್ಲ, ಇಲ್ಲಿ ಆಳದನುಭವವನ್ನು ಅನ್ನುವುದರ ಬದಲಿಗೆ ಆಳದ ಪ್ರೀತಿಯನ್ನು ಎಂದುಕೊಂಡರೆ, ಅದನ್ನು ಮಾತು ಕೈ ಹಿಡಿಯುವುದೇ ಇಲ್ಲ. ಇನ್ನು ಕಾವು ಬೆಳಕಾಗುವುದು? ಪ್ರೀತಿ ಎಂಬ ಕವನ ಹುಟ್ಟುವುದು? ಇದೇನು ಕೊರೆತ ಶುರುಮಾಡಿದೆನಲ್ಲ ಎಂದುಕೊಳ್ಳುತ್ತಿದ್ದೀಯ?

***

ಇರಲಿ, 'ಕಳವಳಿಸದ ನೆಲದ ಚೆಲುವಿಗೆ ನಿನ್ನ ಪ್ರೀತಿಯೇ ಕಾರಣ' ಅಂತ ಅಜ್ಞಾತ ಕವಿಯ ಸಾಲನ್ನು ನೀನು ೧೩ ರ ಮಧ್ಯಾಹ್ನವೇ ಊಟ ಮಾಡೋಕೂ ಮುಂಚೆ ಮೆಸೇಜು ಮಾಡಿ ಸುಮ್ಮನಾಗಿಬಿಟ್ಟಿದ್ದರ ಮರ್ಮವಾದರೂ ಏನು? ಈ ಒಲವಿನ ಗೆಳತಿ ನಂಗೆ ಏನು ಹೇಳಬೇಕೆಂದಳು ಅಂತ ಯೋಚಿಸ್ತಿದ್ದೇನೆ.

***
ಇದು ನಿಂಗೆ ನಾನು ಬರೆದ ಪ್ರೇಮ ಪತ್ರ ಎಂದರೆ ಹುಚ್ಚು ಹೊಳೆಯಂತೆ ನಗುತ್ತೀಯ? ಮೂತಿ ಸೊಟ್ಟ ಮಾಡ್ತೀಯ? ಕೆಂಗಣ್ಣು ಬೀರ್ತೀಯ ಅಂತೆಲ್ಲಾ ಸುಮ್ಮಸುಮ್ಮನೆ ಅಂದ್ಕೊಳಲ್ಲ.

ನಂಗೊತ್ತು. ನೀನು ಇದನ್ನು ದೇವರ ಗುಡಿಯ ಹೂವಿನಂತೆ ಕಣ್ಣಿಗೊತ್ತಿಕೊಂಡು, ಅಷ್ಟೇ ಭಕ್ತಿ, ಉನ್ಮಾದ, ಕುತೂಹಲದಿಂದ ಅಕ್ಷರಕ್ಷರವನ್ನೂ, ನಿನಗೆ ಮಾತ್ರ ಕೇಳಿಸುವಂತೆ ಮತ್ತೆ ಮತ್ತೆ ಓದಿಕೊಳ್ಳುತ್ತೀಯ. ಇಷ್ಟಕ್ಕೂ ಪ್ರೀತಿ ಎಂದರೆ ಇದೇ ತಾನೆ? ಎದೆಯಲ್ಲಿ ಪ್ರೀತಿ ಇದೆ ಅಂತ ನೆನಪಿಸೋದು? ಏನಂತೀಯ?

ನಿನ್ನ...
(ಲೇಖಕರು: ಕೆ. ನರಸಿಂಹ ಮೂರ್ತಿ, ಪತ್ರಕರ್ತರು, ವಾಸ- ಮೈಸೂರು, ಹುಟ್ಟೂರು- ದೊಡ್ಡಬಳ್ಳಾಪುರ, ಶಿಕ್ಷಣ- ಕನ್ನಡ ಎಂ.ಎ, ಬೆಂಗಳೂರು ವಿವಿ)